ಚಾರ್ಟೆರಿಸ್, ಲೆಸ್ಲೀ -

1907- . ಅಮೆರಿಕದ ಹೆಸರಾಂತ ಪತ್ತೇದಾರಿ ಕಾದಂಬರಿಕಾರ. ಜನಪ್ರಿಯ ಕೌತುಕ ಅದ್ಭುತ ರಮ್ಯ ಪತ್ತೇದಾರಿ ಕಾದಂಬರಿಗಳನ್ನು ರಚಿಸುವುದರಲ್ಲಿ ಎತ್ತಿದ ಕೈ ಎಂದು ಪ್ರಸಿದ್ಧಿ ಪಡೆದವ. ಈತನ ಕತೆಗಳು ತಮ್ಮ ಜಾಣ್ಮೆಯ ಕಥಾನಕಕ್ಕೂ ನಾಯಕನ ಆಕರ್ಷಕ ವ್ಯಕ್ತಿತ್ವಕ್ಕೂ ಹೆಸರಾಗಿವೆ. ಈತ ಹುಟ್ಟಿದ್ದು ಸಿಂಗಪುರದಲ್ಲಿ, ತಾಯಿ ಒಬ್ಬ ಆಂಗ್ಲ ಮಹಿಳೆ-ಬೋಯರ್ ಮನೆತನದವಳು. ತಂದೆ ಚೀನೀ ರಾಜವಂಶಕ್ಕೆ ಸೇರಿದ ಒಬ್ಬ ವೈದ್ಯ, ಶಸ್ತ್ರಚಿಕಿತ್ಸಕ. ಈತನ ಹುಟ್ಟು ಹೆಸರು ಲೆಸ್ಲೀ ಚಾರಲ್ಸ್ ಬೋಯರ್ ಯೀನ್. ಹತ್ತು ವರ್ಷದವನಿದ್ದಾಗಲೇ ಬರೆವಣಿಗೆಯನ್ನು ರೂಢಿಸಿಕೊಂಡು ತನ್ನದೇ ಪತ್ರಿಕೆಯನ್ನು ನಡೆಸುತ್ತಿದ್ದ. ಹನ್ನೆರಡನೆಯ ವಯಸ್ಸಿನಲ್ಲಿಯೇ ತಂದೆತಾಯಿಯರೊಂದಿಗೆ ಮೂರು ಬಾರಿ ಪ್ರಪಂಚವನ್ನೆಲ್ಲ ಸುತ್ತಿ ಬಂದ. 17ನೆಯ ವಯಸ್ಸಿನಲ್ಲೇ ಕತೆ ಬರೆದು ಹಣ ಗಳಿಸಲು ಪ್ರಾರಂಭಿಸಿದ. 1925ರಲ್ಲಿ ಇಂಗ್ಲೆಂಡಿಗೆ ಬಂದು ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾದ. 1928ರಲ್ಲಿ ತನ್ನ ಹೆಸರನ್ನು ಲೆಸ್ಲೀ ಚಾರ್ಟೆರಿಸ್ ಎಂದು ಬದಲಾಯಿಸಿಕೊಂಡ. ಹಲವು ಕಾಲ ಮಲಯ ಹಾಗೂ ಸಿಂಗಪುರ ಪ್ರದೇಶಗಳಲ್ಲಿ ರಬ್ಬರ್ ತೋಟಗಾರ, ತವರದ ಗಣಿ ಕೆಲಸಗಾರ ಮತ್ತು ಚಿಪ್ಪುಗಳನ್ನು ಆಯುವ ಮುಳುಗುಕೆಲಸಗಾರ, ಚಿನ್ನದ ಅನ್ವೇಷಕ, ನಾವಿಕ, ಹೋಟಲ್ ಕಾರ್ಮಿಕ ಮತ್ತು ಪ್ರದರ್ಶನ ನಿರ್ವಾಹಕ ಮುಂತಾದ ಹಲವಾರು ಕಾರ್ಯಗಳಲ್ಲಿ ನಿರತನಾಗಿದ್ದು ಜೀವನ ನಿರ್ವಹಣೆ ಮಾಡಿದ. 1930ರಲ್ಲಿ ಈತನ ಅದೃಷ್ಟದ ಬಾಗಿಲು ತೆರೆಯಿತು; ಅದ್ಭುತ ಕೌತುಕ ಪತ್ತೇದಾರಿ ನಾಯಕನಾದ ಸೇಂಟ್ ಎಂಬ ಅಡ್ಡ ಹೆಸರನ್ನುಳ್ಳ ಸೈಮನ್ ಟೆಂಪ್ಲರ್ ಎಂಬ ಪಾತ್ರವನ್ನು ಸೃಷ್ಟಿಸಿದ. ಸೇಂಟ್ ಪಾತ್ರ ಕಾಣಿಸಿಕೊಂಡ ಮೊದಲ ಕಾದಂಬರಿ-ಎಂಟರ್ ದಿ ಸೇಂಟ್ (1930). ಇದು ಲೆಸ್ಲಿಗೆ ಹೆಸರು ಮತ್ತು ಹಣವನ್ನು ಹೇರಳವಾಗಿ ತಂದಿತು. ಸೈಮನ್ ಟೆಂಪ್ಲರ್ ಸಭ್ಯಗೃಹಸ್ಥನಾದರೂ ಸಮಾಜಘಾತುಕರನ್ನು ಸದೆಬಡಿಯಲು ತನ್ನದೇ ಆದ ದರೋಡೆಗಳನ್ನು ಕೊಲೆಗಳನ್ನು ನಡೆಸಿದ ಬಹು ಜನಪ್ರಿಯ ವ್ಯಕ್ತಿ. ಈ ಸಭ್ಯ-ಕಳ್ಳ ಅಮೆರಿಕದಲ್ಲಿ ಪೆರೀ ಮೇಸನನ ಅನಂತರ ಅತ್ಯಂತ ಜನಪ್ರಿಯ ಪತ್ತೇದಾರನಾಗಿದ್ದಾನೆ.

1932ರಲ್ಲಿ ಲೆಸ್ಲೀ ಚಾರ್ಟೆರಿಸ್ ಅಮೆರಿಕಕ್ಕೆ ಹೋಗಿ ಅಲ್ಲಿಯೇ ನೆಲಸಿ 1941ರಲ್ಲಿ ಅಮೆರಿಕನ್ ಪೌರತ್ವ ಪಡೆದ. ಈತನ ಮುಖ್ಯ ಕೃತಿಗಳು ದಿ ಸೇಂಟ್ ಇನ್ ಮಿಯಾಮಿ (1941), ಅಲಿಯಾಸ್ ದಿ ಸೇಂಟ್ (1931), ದಿ ಸೇಂಟ್ ಅರೌಂಡ್ ದಿ ವಲ್ರ್ಡ್. ಸುಮಾರು 40 ಇಂಥ ಕಾದಂಬರಿಗಳನ್ನು ಈತ ರಚಿಸಿದ. ಈತನ ಸೇಂಟ್ ಪಾತ್ರ ಪ್ರಪಂಚದ 20 ಭಾಷೆಗಳ ಜನರಿಗೆ ಪರಿಚಿತವಾಗಿದೆ. ಇವನ ಅನೇಕ ಕಾದಂಬರಿಗಳನ್ನು ಆಧರಿಸಿ ಒಳ್ಳೆಯ ಚಲನಚಿತ್ರಗಳನ್ನು ರೂಪಿಸಿದ್ದಾರೆ.
(ಎಸ್.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ